ಶಿವಮೊಗ್ಗದಲ್ಲಿ ಶೇ.78.24ರಷ್ಟು ಮತದಾನ

| Published : May 08 2024, 01:01 AM IST

ಸಾರಾಂಶ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ನಡೆದಿದ್ದು, ಶೇ. 83.61 ಮತದಾನ ನಡೆದಿದ್ದರೆ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಟ ಎಂದರೆ ಶೇ. 70.33 ಮತದಾನವಾಗಿದೆ. ಉಳಿದಂತೆ ಶಿಕಾರಿಪುರದಲ್ಲಿ ಶೇ.82.66, ಸಾಗರದಲ್ಲಿ ಶೇ.80.2, ಭದ್ರಾವತಿಯಲ್ಲಿ ಶೇ.71.72, ಸೊರಬದಲ್ಲಿ ಶೇ. 83.27, ತೀರ್ಥಹಳ್ಳಿಯಲ್ಲಿ ಶೇ. 82.23, ಬೈಂದೂರಿನಲ್ಲಿ ಶೇ.76.4ರಷ್ಟು ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಮಂಗಳವಾರ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದು, ಶಾಂತಿಯುತವಾಗಿ ನಡೆದ ಮತದಾನದಲ್ಲಿ ಶೇ. 78.24 ರಷ್ಟು ಮತದಾನ ನಡೆದಿದೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ನಡೆದಿದ್ದು, ಶೇ. 83.61 ಮತದಾನ ನಡೆದಿದ್ದರೆ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಟ ಎಂದರೆ ಶೇ. 70.33 ಮತದಾನವಾಗಿದೆ. ಉಳಿದಂತೆ ಶಿಕಾರಿಪುರದಲ್ಲಿ ಶೇ.82.66, ಸಾಗರದಲ್ಲಿ ಶೇ.80.2, ಭದ್ರಾವತಿಯಲ್ಲಿ ಶೇ.71.72, ಸೊರಬದಲ್ಲಿ ಶೇ. 83.27, ತೀರ್ಥಹಳ್ಳಿಯಲ್ಲಿ ಶೇ. 82.23, ಬೈಂದೂರಿನಲ್ಲಿ ಶೇ.76.4ರಷ್ಟು ಮತದಾನವಾಗಿದೆ.

ಬಿಸಿಲಿನ ಕಾರಣಕ್ಕೆ ಮತದಾರರು ಬೆಳಗ್ಗೆಯೇ ಬಹುತೇಕ ಎಲ್ಲ ಮತ ಕೇಂದ್ರಗಳಲ್ಲಿ ಜಮಾಯಿಸಿ ಮತದಾನದ ಉತ್ಸಾಹ ತೋರಿದರು. ಬಿಸಿಲು ಏರಿದಂತೆ ಮತದಾನದ ವೇಗ ಕಡಿಮೆಯಾಯಿತು. ಸಂಜೆ ಪುನಃ ಮತದಾನದ ವೇಗ ಹೆಚ್ಚಿದ್ದು, ಕೆಲವು ಮತ ಕೇಂದ್ರಗಳಲ್ಲಿ ಮತದಾನದ ಅವಧಿಯಾದ ಸಂಜೆ 6 ಗಂಟೆಯ ಬಳಿಕವೂ ದೊಡ್ಡ ಸಂಖ್ಯೆಯಲ್ಲಿ ಮತದಾರರು ಜಮಾಯಿಸಿದ್ದರು. ಇವರೆಲ್ಲರಿಗೂ ಮತ ನೀಡಲು ಅವಕಾಶ ಮಾಡಿಕೊಡಲಾಯಿತು.

ಕೆಲವಡೆ ಮತಯಂತ್ರಗಳು ಕೈ ಕೊಟ್ಟಿದ್ದು ಬಿಟ್ಟರೆ ಉಳಿದ ಕಡೆ ಯಾವುದೇ ಸಮಸ್ಯೆ ಇಲ್ಲದೆ ಮತದಾನ ನಡೆಯಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 24 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 862789 ಪುರುಷ, 890061 ಮಹಿಳಾ ಮತ್ತು 35 ತೃತೀಯ ಲಿಂಗಿ ಸೇರಿದಂತೆ ಒಟ್ಟು 1752885 ಮತದಾರರನ್ನು ಹೊಂದಿರುವ ಜಿಲ್ಲೆಯಲ್ಲಿ 2039 ಮತಟ್ಟೆಗಳನ್ನು ನಿರ್ಮಿಸಿ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿ ಪೂರ್ವ ಸಿದ್ಧತೆ ಕೈಗೊಳ್ಳಲಾಗಿತ್ತು.

ಅಲ್ಲಲ್ಲಿ ತಾಂತ್ರಿಕ ದೋಷ:

ಸೊರಬ ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (ಪೂರ್ವ ಭಾಗ) ಮತಗಟ್ಟೆ ಸಂಖ್ಯೆ 159ರ ಮತಯಂತ್ರದಲ್ಲಿ ದೋಷ ಕಂಡು ಬಂದ ಕಾರಣ ಸುಮಾರು ಒಂದು ತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇನ್ನು ಶಿವಮೊಗ್ಗ ನಗರದ ದುರ್ಗಿಗುಡಿ ಶಾಲೆಯ ಮತಗಟ್ಟೆ 120ರಲ್ಲಿ ಬೆಳಿಗ್ಗೆ ಮತಯಂತ್ರ ಕೆಟ್ಟುಹೋದ ಪರಿಣಾಮ 7 ಗಂಟೆಗೆ ನಡೆಯಬೇಕಿದ್ದ ಮತದಾನ 7.30ಕ್ಕೆ ಆರಂಭವಾಗಿತ್ತು.ಈ ವೇಳೆ ಅಧಿಕಾರಿಗಳು ಮತದಾನ ಮುಗಿಯುವ ಸಮಯಕ್ಕಿಂತ ಹೆಚ್ಚುವರಿ ಅರ್ಧಗಂಟೆ ಹೆಚ್ಚುವರಿಯಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಚುನಾವಣೆ ಅಧಿಕಾರಿಗಳು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದಂತೆ ಶಾಲೆಯ ಮುಂಭಾಗದ ಗೇಟಿನ‌ಬಾಗಿಲು ಹಾಕಿ ಮತದಾನ ಮುಕ್ತಾವೆಂದು ಹೇಳಿದರು.

ಈ ವೇಳೆ ಮತದಾನಕ್ಕೆ ಬರುತ್ತಿದ್ದ ಮತದಾರರು ಮತ್ತು ಚುನಾವಣೆ ಅಧಿಕಾರಿಗಳ ನಡುವೆ ಮಾತಿನ ಜಟಾಪಟಿ ನಡೆಯಿತು. ಬಿಜೆಪಿ ಕಾರ್ಯಕರ್ತ ಐಡಿಯಲ್ ಗೋಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ನಂತರ ಅಧಿಕಾರಿಗಳು ಅರ್ಧಗಂಟೆ ಹೆಚ್ಚುವರಿ ನೀಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟರು.ತಾಂತ್ರಿಕ ದೋಷದಿಂದ ಶಿವಮೊಗ್ಗ ನಗರದ ಬಾಲರಾಜ್‌ ಅರಸ್‌ ರಸ್ತೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಅರ್ಧಗಂಟೆ ಕಾಲ ಮತದಾನ ಸ್ಥಗಿತಗೊಂಡಿತ್ತು.ಅಮೇರಿಕ, ಅಸ್ಟ್ರೇಲಿಯಾ, ಕತ್ತಾರ್ ಮುಂತಾದ ಹೊರದೇಶಗಳಿಂದಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು ವಿಶೇಷವಾಗಿತ್ತು. ಕೆಲವು ಕಡೆ ಮತದಾನ ಮಾಡುವವರಿಗೆ ಹೋಗಲು ಬಸ್‍ಗಳ ತೊಂದರೆಕೂಡ ಆಗಿದ್ದು ಗಮನಕ್ಕೆ ಬಂದಿತ್ತು.ಈ ಬಾರಿ ಜಿಲ್ಲಾ ಹಾಗೂ ಮಹಾನಗರಪಾಲಿಕೆಯ ಆಡಳಿತದ ಸ್ವೀಪ್ ತಂಡ ಜಾಗೃತಿಯನ್ನು ಮೂಡಿಸಿತ್ತು. ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಒಟ್ಟಾರೆ ಕಳೆದ 40 ದಿನಗಳಿಂದ ಸುಡು ಬಿಸಿಲಿನಲ್ಲೂ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಸ್ಪರ್ಧಿಗಳು ಸೇರಿದಂತೆ ಕಾರ್ಯಕರ್ತರು ಹೈರಾಣಾಗಿ ಹೋಗಿದ್ದರು. ಚುನಾವಣೆ ಮುಗಿದರೆ ಸಾಕಪ್ಪ ಎಂದುಕೊಂಡಿದ್ದರು. ಈ ಎಲ್ಲಾ ಬಿಸಿಲು, ಅಭ್ಯರ್ಥಿಗಳ ತಲ್ಲಣ, ಚುನಾವಣೆಯ ತವಕಗಳ ಮಧ್ಯೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಅತ್ಯಂತ ಶಾಂತಿಯುತವಾಗಿಯೇ ನಡೆದಿದೆ.

ವಯಸ್ಸಾದವರಿಗಾಗಿಯೇ ಈ ಬಾರಿ ವ್ಹೀಲ್ ಚೇರ್‌ಗಳನ್ನು ಬಹುತೇಕ ಎಲ್ಲಾ ಮತಕೇಂದ್ರಗಳಲ್ಲೂ ಇಡಲಾಗಿತ್ತು. ಹಿರಿಯರು, ಅಂಗವಿಕಲರು ಇದರ ಸೌಲಭ್ಯ ಪಡೆದು ಮತಚಲಾಯಿಸಿದರು. ಅಬ್ಬಲಗೆರೆಯ 98 ವರ್ಷದ ಶಿವಗಂಗಮ್ಮ, ಶಿಕಾರಿಪುರದ ಈಸೂರಿನಲ್ಲಿ 94 ವರ್ಷದ ಶಿವಾಚಾರ್, 78 ವರ್ಷದ ಈರಮ್ಮ, ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ತುಪ್ಪೂರು ಗ್ರಾ.ಪಂ. ವ್ಯಾಪ್ತಿಯ ಚೋಡನಾಳ ಗ್ರಾಮದ ಜೆಟ್ಟಮ್ಮ ಎಂಬ 100 ವರ್ಷದ ವೃದ್ಧೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ಗಮನ ಸೆಳೆದರು. 70ಕ್ಕೂ ಹೆಚ್ಚು ವರ್ಷ ವಯಸ್ಸಿನ ಅನೇಕರು ಯಾರ ಸಹಾಯವು ಇಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ರಂಗೇರಿದ ‘ಮತದಾನ ಹಬ್ಬ’ಕ್ಕೆ ಉತ್ಸಾಹದ ಕಳೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗಹಿಂದಿನ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಮಾಡಿದ ಪ್ರಯತ್ನ ಫಲ ನೀಡುವಂತೆ ಕಂಡು ಬಂತು, ಜನರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದರು. ಅಕ್ಷರಶಃ ಚುನಾವಣೆಯನ್ನು ಪ್ರಜಾತಂತ್ರದ ಹಬ್ಬದ ರೀತಿಯಲ್ಲಿಯೇ ಸಂಭ್ರಮಿಸಿದರು.ಮತ ಜಾಗೃತಿಗಾಗಿ ಮಾದರಿ ಮತಗಟ್ಟೆಗಳನ್ನು ರಚಿಸಿ ಸಿಂಗರಿಸಿದ್ದರಿಂದ ಮಾದರಿ ಮತಗಟ್ಟೆಗಳಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಹಿರಿಯ‌ ನಾಗರಿಕರು, ದಿವ್ಯಾಂಗರು ಕೂಡ ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದರು.ನಿಷೇಧವಿದ್ದರೂ ಮತಗಟ್ಟೆಗಳ ಸಮೀಪವಿರುವ ಏಜೆಂಟ್ ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರ ದಂಡು ಠಿಕಾಣಿ ಹೂಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದರು. ಅಲ್ಲದೇ ಮತದಾರರನ್ನು ಮತಗಟ್ಟೆಗಳಿಗೆ ಕರೆ ತರಲು ಅಭ್ಯರ್ಥಿಗಳು ವಾಹನ ವ್ಯವಸ್ಥೆಯನ್ನು ಮಾಡಿದ್ದರು.ಯುವ ಮತದಾರರ ಉತ್ಸಾಹ:ಇದೇ ಮೊದಲ ಬಾರಿ ಮತದಾನಕ್ಕೆ ಅವಕಾಶ ಸಿಕ್ಕಿದ್ದ ಯುವ ಮತದಾರರು ಅತ್ಯಂತ ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು.ಗನಮ ಸೆಳೆದ ಮತಗಟ್ಟೆಗಳು:ಕೆಲವು ಬೂತ್‍ಗಳಲ್ಲಿ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಮಹಿಳೆಯರಿಗಾಗಿಯೇ ಸಖಿ ಬೂತ್‍ನ್ನು ನಿರ್ಮಾಣ ಮಾಡಲಾಗಿತ್ತು.ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಅರಮನೆಯಂತೆ ಶೃಂಗಾರಗೊಂಡ ಮತದಾನ ಕೇಂದ್ರದಲ್ಲಿ ಮತಹಾಕಿ ಬಂದು ರಾಜನ ರೀತಿಯ ಕಿರೀಟ ಧರಿಸಿ ಸಂಭ್ರಮಿಸಿದರು. ರವೀಂದ್ರನಗರದ ಸಖಿ ಮತಗಟ್ಟೆ ಪಿಂಕ್ ಬಣ್ಣದಲ್ಲಿ ಗಮನಸೆಳೆಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಬೆಳಲಮಕ್ಕಿ ಮತಗಟ್ಟೆ ಸಂಖ್ಯೆ 76 ಮಧುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರ ಮನಸೆಳೆಯಿತು.ಮರುಕಳಿಸಿದ ವೈಭವ:ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿನ ಮತಗಟ್ಟೆ ಅರಮನೆಯ ಗತವೈಭವವನ್ನು ಸಾರಿದಂತೆ ರೂಪಗೊಂಡಿತ್ತು. 283ರ ಈ ಮತಗಟ್ಟೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಈ ಉದ್ದೇಶದಿಂದಲೇ ಈ ಮತಗಟ್ಟೆ ಸಿದ್ಧವಾಗಿದೆ ಎಂದು ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.ಅದ್ಭುತ ಮತಗಟ್ಟೆ ಮಾದರಿ:ಇಷ್ಟು ದಿನ ಮತದಾನ ಜಾಗೃತಿ ಮೂಡಿಸುತ್ತಿದ್ದ ಶಿವಮೊಗ್ಗದ ಮಹಾನಗರ ಪಾಲಿಕೆ ಸ್ವೀಪ್ ಸಮಿತಿ ಮತಗಟ್ಟೆಯಲ್ಲಿ ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾದರಿಗಳನ್ನು ನಿರ್ಮಿಸಿ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು.

ಸೈನ್ಸ್ ಮೈದಾನದಲ್ಲಿ ಸ್ಮಾರ್ಟ್‌ಸಿಟಿಯ ಮಾಡೆಲ್‌ವೊಂದನ್ನ ನಿರ್ಮಿಸಲಾಗಿತ್ತು. ದ್ರುಪದಮ್ಮ ವೃತ್ತದ ಬಳಿ ಗಾಜನೂರು ಡ್ಯಾಂ ಮತ್ತು ಸಿಂಹಧಾಮದ ಮಾಡೆಲ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಮತಯಂತ್ರ ದೋಷ: 1 ತಾಸು ಮತದಾನ ಸ್ಥಗಿತಸೊರಬ: ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (ಪೂರ್ವ ಭಾಗ) ಮತಗಟ್ಟೆ ಸಂಖ್ಯೆ ೧೫೯ರ ಮತಯಂತ್ರದಲ್ಲಿ ದೋಷ ಕಂಡು ಬಂದ ಕಾರಣ ಸುಮಾರು ಒಂದು ತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.ಮತಗಟ್ಟೆ ೧೫೯ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಎ.ಕೆ.ಕಾಲೋನಿ ಸೇರಿದಂತೆ ಒಟ್ಟು ೯೩೮ ಮತದಾರರಿದ್ದಾರೆ. ಮಹಿಳಾ ಮತದಾರರು ೪೯೫ ಇದ್ದು, ಸಖಿ ಮತಗಟ್ಟೆಯನ್ನಾಗಿಸಲಾಗಿದೆ. ಬೆಳಗ್ಗೆಯಿಂದ ಮಂದ ಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ ಬೆಳಿಗ್ಗೆ ೮-೩೦ ರ ಸುಮಾರಿಗೆ ಮತಯಂತ್ರದಲ್ಲಿ ದೋಷ ಕಂಡು ಬಂದಿತು. ಇದರಿಂದ ಕೆಲ ಕಾಲ ಮತದಾರರಲ್ಲಿ ಗೊಂದಲ ಮೂಡಿತು. ಈ ಸಮಯದಲ್ಲಿ ೩೦ ಜನ ಮತದಾನ ಮಾಡಿದ್ದರು.

ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಹೊಸ ಮತಯಂತ್ರವನ್ನು ಅಳವಡಿಸಿದರು. ನಂತರ ಸುಮಾರು ೪೦ ನಿಮಿಷಗಳ ತರುವಾಯ ಮತದಾನ ಪ್ರಕ್ರಿಯೆ ಆರಂಭಗೊAಡಿತು ಎಂದು ತಿಳಿದು ಬಂದಿದೆ. ಮತಯಂತ್ರದ ದೋಷದ ಬಗ್ಗೆದ ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ.ಭದ್ರಾವತಿ: ಶೇ.71.72 ಮಂದಿಯಿಂದ ಮತ ಚಲಾವಣೆ

ಭದ್ರಾವತಿ: ಈ ಬಾರಿ ಲೋಕಸಭೆ ಚುನಾವಣೆ ಮತದಾನದ ವೇಳೆ ಹಲವು ಘಟನೆಗಳು ವಿಶೇಷವಾಗಿ ಗಮನ ಸೆಳೆದಿದ್ದು, ಈ ನಡುವೆ ಕ್ಷೇತ್ರದಾದ್ಯಂತ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ವಿಧಾನಸಭಾ ಕ್ಷೇತ್ರದಾದ್ಯಂತ ಶೇ.71.72ರಷ್ಟು ಮತದಾನ ನಡೆದಿದೆ.

ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನ ಸುಮಾರು 11 ಗಂಟೆವರೆಗೆ ಬಿರುಸಿನಿಂದ ನಡೆಯಿತು. ನಂತರ ಮಧ್ಯಾಹ್ನ 3 ಗಂಟೆವರೆಗೂ ನಿಧಾನಗತಿಯಲ್ಲಿ ಸಾಗಿತು. ಪುನಃ ಸಂಜೆ 4 ರಿಂದ 6ಗಂಟೆವರೆಗೂ ಬಿರುಸಿನಿಂದ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ ಸುಡು ಬಿಸಿಲಿನ ನಡುವೆಯೂ ಮತದಾರರು ಮತದಾನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು. ಮಧ್ಯಾಹ್ನದ ವೇಳೆ ಕೆಲವು ಮತಗಟ್ಟೆಗಳಲ್ಲಿ ಶೇ.50ರಷ್ಟು ಮತದಾನ ನಡೆದಿರುವುದು ಕಂಡು ಬಂದಿತು. ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಮತದಾನ ನಡೆದಿದ್ದು, ಒಟ್ಟಾರೆ ಕ್ಷೇತ್ರದಾದ್ಯಂತ ಸಂಜೆ ಮತದಾನ ಮುಕ್ತಾಯದ ವೇಳೆಗೆ ಶೇ.71.72ರಷ್ಟು ಮತದಾನ ನಡೆದಿದೆ.ಸಾಗರದಲ್ಲಿ ಮತದಾನ ಶಾಂತಿಯುತ

ಸಾಗರ: ತಾಲ್ಲೂಕಿನಾದ್ಯಂತ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದೆ ಮತದಾನ ನಡೆದಿದೆ. ತಾಲ್ಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ ೧೦ಗಂಟೆಯವರೆಗೆ ಬಿರುಸಿನ ಮತದಾನ ನಡೆದಿದೆ. ಭಾರಿ ಬಿಸಿಲಿನ ಬೇಗೆ ಹಾಗೂ ಮಧ್ಯಾಹ್ನದ ನಂತರ ಎಲ್ಲಿಯಾದರೂ ಬೇಸಿಗೆ ಮಳೆ ಬರಬಹುದು ಎನ್ನುವ ಆತಂಕದಿಂದ ಮತದಾರರು ಬೆಳಗ್ಗೆಯೇ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ. ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ ೭ಗಂಟೆಯಿಂದಲೇ ದೊಡ್ಡ ಸರತಿ ಸಾಲು ಕಂಡುಬಂದಿತ್ತು. ೧೧ ಗಂಟೆಯ ನಂತರ ನಿಧಾನಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಅಪರಾಹ್ನ ೩ಗಂಟೆಯ ನಂತರ ಮತ್ತೆ ಚುರುಕುಗೊಂಡಿತು.ಮತಯಂತ್ರದಲ್ಲಿ ದೋಷ:ತಾಲ್ಲೂಕಿನ ಹಿರೇಹಾರಕ ಬೂತ್ ನಂ. ೧೧೪ ಮತ್ತು ಕಣ್ಣೂರು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸ್ವಲ್ಪಕಾಲ ಮತದಾನ ವಿಳಂಬವಾಗಿತ್ತು. ಚನ್ನಗೊಂಡ ಮತಗಟ್ಟೆಯಲ್ಲಿ ಮತದಾರರು ತಾವು ಮತ ಚಲಾಯಿಸುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಾಗ ಉಪವಿಭಾಗಾಧಿಕಾರಿ ಯತೀಶ್ ಆರ್. ಸ್ಥಳಕ್ಕೆ ಧಾವಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಮೇಲೆ ಮತದಾನ ನಡೆಯಿತು.

ಚುನಾವಣೆ ಬಹಿಷ್ಕಾರ:ಮಾಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆಳವರಿಗೆ ಗ್ರಾಮಸ್ಥರು ಅಧಿಕಾರಿಗಳ ಮನವೊಲಿಕೆಗೆ ಬಗ್ಗದೆ ಮತದಾನ ಬಹಿಷ್ಕಾರ ಮಾಡಿದ್ದಾರೆ. ಈ ಮತಗಟ್ಟೆಯಲ್ಲಿ ೪೬೫ ಮತಗಳಿದ್ದು, ಪಕ್ಕದ ಮಜರೆ ಗ್ರಾಮದಲ್ಲಿ ೧೧೨ ಮಂದಿ ಮತದಾನ ಮಾಡಿದ್ದು, ಮೆಳವರಿಗೆ ಗ್ರಾಮದ ೩೫೩ ಮತದಾರರು ಮತ ಚಲಾಯಿಸದೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಶಿರಾಳಕೊಪ್ಪದಲ್ಲಿ ಬಿರುಸಿನ ಮತದಾನ; ಶಾಂತಿಯುತ

ಶಿರಾಳಕೊಪ್ಪ: ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮತದಾನ ಬೆಳಗಿನಿಂದಲೇ ಬಿರುಸಾಗಿ ನಡೆದು ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಮತದಾನ ನಡೆಯಿತು.ಇಲ್ಲಿಯ ಪುರಸಭೆ ಮತದಾರರಿಗೆ ಪ್ರಜಾಪ್ರಭತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಲು ಮತದಾನ ಮಾಡುವ ೪೦೦ ಜನರಿಗೆ ಸಸಿ ವಿತರಿಸಿ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಯಿತು. ಹಾಗೆಯೇ ಶಿರಾಳಕೊಪ್ಪ ಸುತ್ತಮುತ್ತಲ ಗ್ರಾಮಗಳಾದ ಬೆಲವಂತನಕೊಪ್ಪ, ತಡಗಣಿ, ಬಳ್ಳಿಗಾವಿ ಸೇರಿದಂತೆ ಎಲ್ಲ ಹಳ್ಳಿಗಳಲ್ಲಿ ಮತದಾನ ಬಿರುಸಿನಿಂದ, ಶಾಂತವಾಗಿ ನಡೆಯಿತು.ಮತದಾನ ಬಹಿಷ್ಕಾರ:ಇಲ್ಲಿಗೆ ಹತ್ತಿರದ ತೊಗರ್ಸಿ ಗ್ರಾಪಂ ವ್ಯಾಪ್ತಿಯ ಶಿಡ್ಡಿಹಳ್ಳಿ ಗ್ರಾಮದ ಒಂದು ವಗರ್ದ ಹಿಂದುಳಿದ ಜನಾಂಗ ಗ್ರಾಮದ ಗಾವಠಾಣಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ೧೧೦ ಮತದಾರರು ಮತಹಾಕದೇ ಬಹಿಷ್ಕಾರ ಹಾಕಿದ್ದಾರೆ.

ಒಟ್ಟು ಗ್ರಾಮದಲ್ಲಿ ೨೦೬ ಮತಗಳಿದ್ದು, ಒಂದು ಕೋಮಿನ ಜನರನ್ನು ಬಿಟ್ಟರೆ ಉಳಿದ ೯೦ ಜನರು ಬಂದು ಮತಹಾಕಿ ಹೋಗಿದ್ದಾಗಿ ರಾಜಕೀಯ ಪಕ್ಷದ ಪ್ರಮುಖರು ಪತ್ರಿಕೆಗೆ ತಿಳಿಸಿದ್ದಾರೆ. ಈ ಬಾರಿ ಸಾಕಷ್ಟು ಯುವ ಜನಾಂಗ ಪ್ರಥಮ ಬಾರಿಗೆ ಮತದಾನ ಮಾಡಿ ಸಂತಸ ಪಟ್ಟಿದ್ದಾರೆ. ಪ್ರಥಮ ಬಾರಿಗೆ ಮತದಾನ ಮಾಡಿದ ಶಿರಾಳಕೊಪ್ಪದ ರಮ್ಯ ಮತ್ತು ಅಂಕಿತ ಮತದಾನ ಮಾಡಿ ಸಂತಸಪಟ್ಟು ನಮಗೆ ಮತದಾನದ ಮಹತ್ವ ಏನು ಎಂಬುದು ತಿಳಿಯಿತು ಎಂದು ಪತ್ರಿಕೆಗೆ ತಿಳಿಸಿದರು.ಕೈಕೊಟ್ಟ ಮತದಾನ ಯಂತ್ರ:ಪಟ್ಟಣದ ಪಂಪ್‌ಹೌಸ್ ಕಾಲೋನಿಯ ೬೫ ನೇ ಬೂತ್‌ನಲ್ಲಿ ಮಧ್ಯಾಹ್ಯ ಮತಯಂತ್ರ ಬ್ಯಾಟರಿ ಡೌನ್ ಆಗಿ ನಿಂತ ಕಾರಣ ಕೆಲ ಸಮಯ ಗೊಂದಲ ಉಂಟಾಗಿ ತಕ್ಷಣ ಸಂಬಂಧಿ ಸಿದ ಅಧಿಕಾರಿಗಳು ಬದಲಿ ಯಂತ್ರ ಹಾಕಿ ಸರಿಪಡಿಸಿ ಸಂಜೆ ಹೆಚ್ಚು ಸಮಯ ಕೊಡುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಯಾವುದೇ ಗಲಾಟೆ ಆಗಲಿಲ್ಲ.

ಮತದಾನ ಮಾಡಿ ದೈವಾಧೀನ: ಪಟ್ಟಣದ ನೆಹರು ಕಾಲೋನಿ ನಿವಾಸಿ ಮುಂಗಲಗಿ ಸೋಮಣ್ಣ ( 74) ಸಾಕಷ್ಟು ಸಮಯದಿಂದ ತೀವ ಅನಾರೋಗ್ಯದಿಂದ ಬಳಲುತ್ತಿದ್ದರೂ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಮಾಡಿ ಸ್ವಲ್ಪ ಸಮಯದಲ್ಲಿ ನಿಧನರಾಗಿದ್ದಾರೆ.ಶಾಯಿ ಗುರುತು ತೋರಿದರೆ ಗೋಲ್ಡ್ ಫಿಶ್ ಉಡುಗೊರೆ !

ಸಾಗರ: ಕಡ್ಡಾಯವಾಗಿ ಮತದಾನ ಮಾಡಬೇಕು, ಮತದಾನದ ಪ್ರಮಾಣ ಹೆಚ್ಚಾಗಬೇಕು ಎನ್ನುವ ಕಾಳಜಿಯಿಂದ ಪಟ್ಟಣದ ಶ್ರೀಷ ಅಕ್ವೇರಿಯಂ ಮಾಲೀಕ ಆನಂದ ಬಾಳೆಕೊಪ್ಪ ವೋಟು ಮಾಡಿ ಬಂದು ಶಾಯಿ ಗುರುತು ತೋರಿಸಿದವರಿಗೆ ಎರಡು ಗೋಲ್ಡ್ ಫಿಶ್ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.ಚುನಾವಣೆ ಘೋಷಣೆಯಾದಾಗಿನಿಂದ ಶೇ.೧೦೦ ರಷ್ಟು ಮತದಾನವಾಗಬೇಕೆಂದು ಸ್ವೀಪ್ ಸಮಿತಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತ್ತು. ಈ ನಡುವೆ ಪಟ್ಟಣದ ಶಿವಾಜಿ ರಸ್ತೆಯಲ್ಲಿರುವ ಶ್ರೀಷ ಅಕ್ವೇರಿಯಂ ಮಾಲಿಕ ಆನಂದ ಬಾಳೆಕೊಪ್ಪ ಕಡ್ಡಾಯ ಮತದಾನಕ್ಕೆ ತಮ್ಮದೆ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಈಗ್ಗೆ ಕೆಲವು ದಿನಗಳ ಹಿಂದೆಯೇ ಮತ ಹಾಕಿ ಬಂದು ಶಾಯಿ ಗುರುತು ತೋರಿಸಿದವರಿಗೆ ಉಚಿತವಾಗಿ ಗೋಲ್ಡ್‌ಫಿಶ್‌ ಉಡುಗೊರೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದರು. ಅದರಂತೆ ಮಂಗಳವಾರ ಬೆ.೧೦ಗಂಟೆಯ ನಂತರ ಮತದಾನ ಮಾಡಿ ತಮ್ಮ ಅಂಗಡಿಗೆ ಬಂದವರಿಗೆ ಉಚಿತವಾಗಿ ತಲಾ ಎರಡು ಗೋಲ್ಡ್ ಫಿಶ್ ನೀಡಿದ್ದಾರೆ.