ನಾಳೆಯಿಂದ ಶ್ರೀಸಿದ್ಧಾರೂಢ ಮಿಷನ್ ಆಶ್ರಮದ 25ನೇ ವರ್ಷದ ಸಂಭ್ರಮ

| Published : May 09 2024, 01:15 AM IST

ಸಾರಾಂಶ

ನಗರದ ರಾಮೋಹಳ್ಳಿಯ ಶ್ರೀಸಿದ್ಧಾರೂಢ ಮಿಷನ್‌ ಆಶ್ರಮದ 25ನೇ ವರ್ಷದ ಸಂಭ್ರಮದ ಅಂಗವಾಗಿ ಮೇ 10ರಿಂದ 12ರವರೆಗೆ ಮೂರು ದಿನ ಆಶ್ರಮದಲ್ಲಿ 108 ಮಠಾಧೀಶರ ಸಮಾವೇಶ, ಆರೂಢಶ್ರೀ ಪುರಸ್ಕಾರ, ಭಜನ ಸಮ್ಮೇಳನ, ಸಾಂಸ್ಕೃತಿಕ ಭವನ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ರಾಮೋಹಳ್ಳಿಯ ಶ್ರೀಸಿದ್ಧಾರೂಢ ಮಿಷನ್‌ ಆಶ್ರಮದ 25ನೇ ವರ್ಷದ ಸಂಭ್ರಮದ ಅಂಗವಾಗಿ ಮೇ 10ರಿಂದ 12ರವರೆಗೆ ಮೂರು ದಿನ ಆಶ್ರಮದಲ್ಲಿ 108 ಮಠಾಧೀಶರ ಸಮಾವೇಶ, ಆರೂಢಶ್ರೀ ಪುರಸ್ಕಾರ, ಭಜನ ಸಮ್ಮೇಳನ, ಸಾಂಸ್ಕೃತಿಕ ಭವನ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶ್ರೀಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ। ಆರೂಢಭಾರತೀ ಸ್ವಾಮೀಜಿ, ಮೇ 10ರಂದು ಬೆಳಗ್ಗೆ 6.45ಕ್ಕೆ ಹರಳಕಟ್ಟೆ ಶ್ರೀಶಿವಾನಂದ ಮಠದ ನಿಜಗುಣ ಸ್ವಾಮೀಜಿ ಅವರಿಂದ ಪ್ರಣವ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ಶ್ರೀಸಿದ್ಧಾರೂಢರಿಗೆ ಪಂಚಾಮೃತ ಅಭಿಷೇಕ. ನಂತರ ಭಜನ ಸಮ್ಮೇಳನ. 8.30ರಿಂದ ಜಪಯಜ್ಞ, ಭಗವದ್ಗೀತೆ ವಚನ ಸಿದ್ದಾರೂಢ ಕಥಾಮೃತಗಳ ಪಾರಾಯಣವು ನಡೆಯಲಿದೆ ಎಂದರು.

ಹೊಸನಗರದ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿಸ್ವಾಮೀಜಿ, ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಡರಕೊಪ್ಪ ಪೂರ್ಣಾನಂದಶ್ರಮದ ನ್ಯಾಯವೇದಾಂತ ಆಚಾರ್ಯ ದಯಾನಂದ ಸರಸ್ವತಿ ಸ್ವಾಮೀಜಿ ಅವರು ಸಾನಿಧ್ಯ ವಹಿಸುವರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ಮಾಜಿ ಸಚಿವರಾದ ವಿ.ಸೋಮಣ್ಣ, ಬೈರತಿ ಬಸವರಾಜು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.

ಮೇ1 1ರಂದು ಬೆಳಗ್ಗೆ 11.15ಕ್ಕೆ ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ‘ಆರೋಢ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ಜಯಂದ್ರಪುರಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಯವರು ಸಾನಿಧ್ಯ ವಹಿಸುವರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಸಾಂಸ್ಕೃತಿಕ ಭವನ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿದ್ಧಾರೂಢ ಕಥಾಮೃತ ಬಿಡುಗಡೆ ಮಾಡಲಿದ್ದಾರೆ‌ ಎಂದು ತಿಳಿಸಿದರು.