ಬಳ್ಳಾರಿ ಲೋಕಸಭಾ ಅಖಾಡದಲ್ಲಿ 10 ಅಭ್ಯರ್ಥಿಗಳು

| Published : Apr 23 2024, 12:53 AM IST

ಬಳ್ಳಾರಿ ಲೋಕಸಭಾ ಅಖಾಡದಲ್ಲಿ 10 ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಏ.20ರಂದು ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮವಾಗಿದ್ದವು.

ಬಳ್ಳಾರಿ: ಬಳ್ಳಾರಿ ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ದಿನವಾದ ಸೋಮವಾರದಂದು, ಓರ್ವ ಅಭ್ಯರ್ಥಿ ತಮ್ಮ ಉಮೇದುವಾರಿಕೆ ವಾಪಸ್ ತೆಗೆದುಕೊಂಡಿದ್ದು, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಕೆಸ್ವಾನ್ ವಿಡಿಯೋ (ವಿಸಿ ಹಾಲ್) ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಏ.12ರಿಂದ 19ರವರೆಗೆ ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಏ.20ರಂದು ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮವಾಗಿದ್ದವು. ನಾಮಪತ್ರ ವಾಪಸ್ ಪಡೆಯುವ ದಿನವಾದ ಏ.22ರಂದು ಪಕ್ಷೇತರ ಅಭ್ಯರ್ಥಿ ಬಿ.ಭಾಗ್ಯಲಕ್ಷ್ಮಿ (ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪತ್ನಿ) ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ ಎಂದು ತಿಳಿಸಿದರು.

ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು:

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಮ್, ಬಿಎಸ್ಪಿಯ ವಾಲ್ಮೀಕಿ ಕೃಷ್ಣಪ್ಪ, ಬಿಜೆಪಿಯ ಬಿ.ಶ್ರೀರಾಮುಲು, ಅದೇರೀತಿ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಸಿ.ಚನ್ನವೀರ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್, ಪ್ರಹರ್ ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಮಂಜಪ್ಪ, ನವಭಾರತ್ ಸೇನ ಪಕ್ಷದ ಅಭ್ಯರ್ಥಿ ಜಿ.ಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಅರುಣ್ ಎಸ್ ಹಿರೇಹಾಳ್, ವೈ.ಪಂಪಾಪತಿ, ವೀರೇಶ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ ಎಂದು ವಿವರಿಸಿದರು.

ಈಗಾಗಲೇ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಕೂಡ ಹಂಚಿಕೆ ಮಾಡಲಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದರು.

ಬೇಸಿಗೆ ಬಿಸಿಲಿರುವುದರಿಂದ ಮತದಾನ ದಿನದಂದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮತಗಟ್ಟೆಗಳಲ್ಲಿ ಮತದಾರರು ನಿಲ್ಲಲು ನೆರಳು ಇಲ್ಲದಿರುವೆಡೆ ಶ್ಯಾಮಿಯಾನ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮತದಾರರನ್ನು ಮತಗಟ್ಟೆಗೆ ಸೆಳೆಯಲು 40 ಸಖಿ ಮಹಿಳಾ ಮತಗಟ್ಟೆಗಳು, 8 ವಿಶೇಷಚೇತನ ಹಾಗೂ 8 ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.

ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಈಗಾಗಲೇ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

1950 ಟೋಲ್ ಫ್ರೀ ಸಂಖ್ಯೆ ಬಳಸಿ:

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಹಣ-ಉಡುಗೋರೆ ಹಂಚುವುದು ಹಾಗೂ ಚುನಾವಣೆ ಸಂಬಂಧಿತ ಇತರೆ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1950 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ಸಲ್ಲಿಸಬಹುದು ಎಂದರು.

ಚುನಾವಣೆ ಕಾರ್ಯ ಮತ್ತು ಪ್ರಚಾರ ಕಾರ್ಯಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಹಾಗೂ ಚುನಾವಣಾ ಆಯೋಗದ ನಿರ್ದೇಶನವಿದ್ದು, ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳು 18 ವರ್ಷದೊಳಗಿನ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಲ್ಲಿ ಕಾಯ್ದೆಯನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿಸಿ ಮಿಶ್ರಾ ಅವರು ಖಡಕ್ ಸೂಚನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಇದ್ದರು.