ನೋಟಾಗೇ ಗರಿಷ್ಠ ಮತ ಬಂದರೆ ಮುಂದೇನು? ಆಯೋಗಕ್ಕೆ ಸುಪ್ರೀಂ ನೋಟಿಸ್‌

| Published : Apr 27 2024, 01:24 AM IST / Updated: Apr 27 2024, 05:11 AM IST

ನೋಟಾಗೇ ಗರಿಷ್ಠ ಮತ ಬಂದರೆ ಮುಂದೇನು? ಆಯೋಗಕ್ಕೆ ಸುಪ್ರೀಂ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕ್ಷೇತ್ರದಲ್ಲಿ ಬೇರೆಲ್ಲಾ ಅಭ್ಯರ್ಥಿಗಳಿಗಿಂತ ‘ನನ್‌ ಆಫ್‌ ದಿ ಎಬೋವ್‌’ (ನೋಟಾ - ಮೇಲಿನ ಯಾರಿಗೂ ನನ್ನ ಮತ ಇಲ್ಲ) ಆಯ್ಕೆಗೆ ಹೆಚ್ಚು ಮತ ಬಂದರೆ ಆಗ ಏನು ಮಾಡಬೇಕು ಎಂದು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ನವದೆಹಲಿ: ಯಾವುದೇ ಕ್ಷೇತ್ರದಲ್ಲಿ ಬೇರೆಲ್ಲಾ ಅಭ್ಯರ್ಥಿಗಳಿಗಿಂತ ‘ನನ್‌ ಆಫ್‌ ದಿ ಎಬೋವ್‌’ (ನೋಟಾ - ಮೇಲಿನ ಯಾರಿಗೂ ನನ್ನ ಮತ ಇಲ್ಲ) ಆಯ್ಕೆಗೆ ಹೆಚ್ಚು ಮತ ಬಂದರೆ ಆಗ ಏನು ಮಾಡಬೇಕು ಎಂದು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಖ್ಯಾತ ಲೇಖಕ ಶಿವ ಖೇರಾ ಅವರು ‘ನೋಟಾಗೆ ಗರಿಷ್ಠ ಮತ ಬಂದರೆ ಆ ಕ್ಷೇತ್ರದ ಮತದಾನ ರದ್ದುಪಡಿಸಿ ಹೊಸತಾಗಿ ಮತದಾನ ನಡೆಸಬೇಕು. ನೋಟಾವನ್ನು ಕೂಡ ಒಬ್ಬ ಕಾಲ್ಪನಿಕ ಅಭ್ಯರ್ಥಿಯೆಂದು ಪರಿಗಣಿಸಬೇಕು. ನೋಟಾಗಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಗಳಿಗೆ ಮುಂದಿನ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿತು.

ಇತ್ತೀಚೆಗೆ ಸೂರತ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ಅಸಿಂಧುಗೊಂಡು, ಬೇರೆಲ್ಲಾ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ ಬಿಜೆಪಿ ಅಭ್ಯರ್ಥಿಯನ್ನು ವಿಜಯಿಯೆಂದು ಘೋಷಿಸಿದ ಪ್ರಕರಣವನ್ನು ಇದೇ ವೇಳೆ ಉಲ್ಲೇಖಿಸಿದ ಅರ್ಜಿದಾರರು, ‘ಒಬ್ಬನೇ ಅಭ್ಯರ್ಥಿ ಕಣದಲ್ಲಿದ್ದರೂ ನೋಟಾ ಆಯ್ಕೆ ಕೂಡ ಮತದಾರರಿಗೆ ಇರುವ ಕಾರಣ ಅಲ್ಲಿ ಚುನಾವಣೆ ನಡೆಸಬೇಕು. ನೋಟಾ ಎಂಬುದು ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ತೋರಿಸಲು ಮತದಾರರಿಗಿರುವ ಪ್ರಬಲವಾದ ಅಸ್ತ್ರವಾಗಬೇಕು’ ಎಂದು ಕೂಡ ಮನವಿ ಮಾಡಿದ್ದಾರೆ.