ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ನಾಗಾಲ್ಯಾಂಡ್‌ನಲ್ಲಿ 4 ಲಕ್ಷ ಜನರಿಂದ ಮತ ಬಹಿಷ್ಕಾರ

| Published : Apr 20 2024, 01:00 AM IST / Updated: Apr 20 2024, 07:46 AM IST

ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ನಾಗಾಲ್ಯಾಂಡ್‌ನಲ್ಲಿ 4 ಲಕ್ಷ ಜನರಿಂದ ಮತ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ದಾಖಲು ಆಗಿದ್ದು, ಸುಮಾರು 4 ಲಕ್ಷ ಜನ ಮತದಾನದಿಂದ ದೂರವುಳಿದಿದ್ದಾರೆ.

ಕೊಹಿಮಾ: ಪೂರ್ವ ನಾಗಾಲ್ಯಾಂಡ್‌ ಪ್ರದೇಶದಲ್ಲಿ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿರುವ ರಾಜ್ಯದ ಆರು ಜಿಲ್ಲೆಗಳ ಸುಮಾರು 4 ಲಕ್ಷ ಮತದಾರರು ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದಾರೆ.

ಈ ಕುರಿತು ಪೂರ್ವ ನಾಗಾಲ್ಯಾಂಡ್‌ ಪೀಪಲ್‌ ಆರ್ಗನೈಜೇಷನ್‌ (ಇಎನ್‌ಪಿಒ) ಸಂಘಟನೆಯು ಸಂಬಂಧಿತ ಪ್ರದೇಶಗಳಲ್ಲಿ ಬಂದ್‌ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೇವೆಗಳು ಬಂದ್‌ ಆಗಿದ್ದವು. ಈ ಪ್ರದೇಶದ ಜನಪ್ರತಿನಿಧಿಗಳೂ ಕೂಡ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸದೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯದ 20 ವಿಧಾನಸಭಾ ಕ್ಷೇತ್ರಗಳ ಎಲ್ಲ 738 ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.

ಏಕೆ ಬಹಿಷ್ಕಾರ?

ನಾಗಾಲ್ಯಾಂಡ್‌ನ ಪೂರ್ವ ಭಾಗದ ಆರು ಜಿಲ್ಲೆಗಳಿಗೆ ರಾಜ್ಯ ಸರ್ಕಾರವು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ಫ್ರಾಂಟಿಯರ್‌ ನಾಗಾಲ್ಯಾಂಡ್‌ ಟೆರಿಟರಿ (ಎಫ್‌ಎನ್‌ಟಿ) ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತ ಬಹಿಷ್ಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳ 20 ವಿಧಾನಸಭಾ ಕ್ಷೇತ್ರಗಳ ಎಲ್ಲ 738 ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದ್ದು, ಬರೋಬ್ಬರಿ 4,00,032 ಮತದಾರರು ಮತ ಬಹಿಷ್ಕರಿಸಿದ್ದಾರೆ.