ಕೆನಡಾದಲ್ಲಿ 3 ಭಾರತೀಯರ ಬಂಧನ ‘ಮತಬ್ಯಾಂಕ್‌ ರಾಜಕೀಯ’: ಜೈಶಂಕರ್‌

| Published : May 06 2024, 12:31 AM IST / Updated: May 06 2024, 05:58 AM IST

ಕೆನಡಾದಲ್ಲಿ 3 ಭಾರತೀಯರ ಬಂಧನ ‘ಮತಬ್ಯಾಂಕ್‌ ರಾಜಕೀಯ’: ಜೈಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೆನಡಾದಲ್ಲಿ 3 ಭಾರತೀಯರ ಬಂಧನ ಆಗಿರುವುದು ‘ಮತಬ್ಯಾಂಕ್‌ ರಾಜಕೀಯ’ದ ಸಲುವಾಗಿ ಎಂದು ವಿದೇಶಾಂಗ ಮಂತ್ರಿ ಜೈಶಂಕರ್‌ ಸ್ಪಷ್ಟಪಡಿಸಿದ್ದು, ಭಾರತಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿ: ಖಲಿಸ್ತಾನಿ ಉಗ್ರ ಹರದೀಪ್‌ ಸಿಂಗ್‌ ನಿಜ್ಜರ್‌ನ ಹಂತಕರು ಎಂಬ ಆರೋಪದ ಮೇಲೆ 3 ಭಾರತೀಯರನ್ನು ಬಂಧಿಸಿರುವುದಾಗಿ ಕೆನಡಾ ಸರ್ಕಾರ ಹೇಳಿರುವುದಕ್ಕೆ ಚುನಾವಣೆಯ ಹೊಸ್ತಿಲಲ್ಲಿರುವ ಆ ದೇಶದ ಮತಬ್ಯಾಂಕ್‌ ರಾಜಕೀಯ ಕಾರಣ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತೀಕ್ಷ್ಣವಾಗಿ ಹೇಳಿದ್ದಾರೆ.

ಕಳೆದ ವರ್ಷ ವ್ಯಾಂಕೋವರ್‌ನಲ್ಲಿ ನಿಜ್ಜರ್‌ ಹತ್ಯೆಗೀಡಾಗಿದ್ದ. ಅದಕ್ಕೆ ಸಂಬಂಧಿಸಿ 3 ಭಾರತೀಯರನ್ನು ಬಂಧಿಸಿರುವುದಾಗಿ ಕೆನಡಾ ಶನಿವಾರ ಹೇಳಿತ್ತು.

ಇದಕ್ಕೆ ಭಾನುವಾರ ಪ್ರತಿಕ್ರಿಯಿಸಿರುವ ಜೈಶಂಕರ್‌, ‘ಇದರ ಬಗ್ಗೆ ಸುದ್ದಿ ನೋಡಿದ್ದೇನೆ. ಬಂಧಿತರು ಭಾರತೀಯ ಮೂಲದ ಯಾವುದಾದರೂ ಗ್ಯಾಂಗ್‌ನ ಹಿನ್ನೆಲೆ ಇರುವವರಾಗಿರಬಹುದು. ಅಲ್ಲಿನ ಪೊಲೀಸರು ಏನು ಹೇಳುತ್ತಾರೋ ನೋಡೋಣ. ವಾಸ್ತವವಾಗಿ ಭಾರತಕ್ಕೂ ಇದಕ್ಕೂ ಸಂಬಂಧವಿಲ್ಲ. ಪಂಜಾಬ್‌ನ ಸಂಘಟಿತ ಕ್ರಿಮಿನಲ್‌ಗಳು ತನ್ನ ನೆಲದಲ್ಲಿ ಕಾರ್ಯಾಚರಣೆ ನಡೆಸಲು ಕೆನಡಾ ಅವಕಾಶ ಮಾಡಿಕೊಟ್ಟಿದೆ. ಖಲಿಸ್ತಾನಿ ಉಗ್ರರು ಕೆನಡಾದ ಪ್ರಜಾಪ್ರಭುತ್ವವನ್ನು ಬಳಸಿಕೊಂಡು ಮತಬ್ಯಾಂಕ್‌ ಆಗಿ ಬೆಳೆದಿದ್ದಾರೆ. ಕೆನಡಾದಲ್ಲಿ ಚುನಾವಣೆ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಈಗಿನ ಬೆಳವಣಿಗೆಗಳು ನಡೆಯುತ್ತಿರಬಹುದು’ ಎಂದು ಹೇಳಿದ್ದಾರೆ.

ಅಲ್ಲದೆ, ‘ಬಂಧನದ ಬಗ್ಗೆ ಭಾರತಕ್ಕೆ ಕೆನಡಾ ಯಾವುದೇ ಮಾಹಿತಿ ನೀಡಿಲ್ಲ. ಮಾಹಿತಿ ನೀಡಿದರೆ ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದಿದ್ದಾರೆ.

ಕಳೆದ ವರ್ಷದ ಜೂನ್‌ನಲ್ಲಿ ನಿಜ್ಜರ್‌ ಹತ್ಯೆಯ ಬಳಿಕ ಇದರಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಹೇಳಿದ್ದು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು.