ಅಡ್ವಾಣಿ ಮುಡಿಗೆ ‘ಭಾರತ ರತ್ನ’ ಕಿರೀಟ

| Published : Apr 01 2024, 12:46 AM IST / Updated: Apr 01 2024, 06:56 AM IST

ಸಾರಾಂಶ

ಅಡ್ವಾಣಿಗೆ ಭಾರತ ರತ್ನ ಗೌರವ ನೀಡಿ ಸನ್ಮಾನಿಸಿದ ವೇಳೆ ರಾಷ್ಟ್ರಪತಿ ದ್ರೌಪದಿ, ಮೋದಿ, ಶಾ, ರಾಜನಾಥ್‌, ವೆಂಕಯ್ಯ, ಧನಕರ್‌ ಉಪಸ್ಥಿತರಿದ್ದರು.  .

  ನವದೆಹಲಿ :  ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾನುವಾರ ದೆಹಲಿಯ ಅವರ ನಿವಾಸದಲ್ಲಿ ನಡೆದ ಭಾವುಕ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಮಹೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು

.ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಮಾಜಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಉಪಸ್ಥಿತರಿದ್ದರು.

ರಾಷ್ಟ್ರಪತಿಗಳು ಹಿರಿಯ ನಾಯಕನಿಗೆ ಭಾರತ ರತ್ನ ನೀಡಿ ಗೌರವಿಸಿದಾಗ ಪ್ರಧಾನಿ ಮೋದಿ ಅಡ್ವಾಣಿ ಪಕ್ಕದಲ್ಲಿ ಕುಳಿತಿದ್ದರು. ಅಡ್ವಾಣಿ ಅವರ ಕೈ ಹಿಡಿದು ಶುಭಾಶಯಗಳನ್ನು ತಿಳಿಸಿ ಕುಶಲೋಪರಿ ವಿಚಾರಿಸಿದರು.

ಈ ವರ್ಷ, ಸರ್ಕಾರವು ಐದು ಭಾರತ ರತ್ನ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಅಡ್ವಾಣಿ, ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ನೀಡಲಾಗಿತ್ತು.ರಾವ್, ಚರಣ್‌ ಸಿಂಗ್, ಸ್ವಾಮಿನಾಥನ್ ಮತ್ತು ಠಾಕೂರ್ ಅವರ ಕುಟುಂಬ ಸದಸ್ಯರು ಶನಿವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಆದರೆ ವೃದ್ಧಾಪ್ಯದ ತೊಂದರೆಗಳ ಕಾರಣ ಅಡ್ವಾಣಿ ಅವರಿಗೆ ಅಲ್ಲಿಗೆ ಬರಲಾಗದ ಕಾರಣ ಮನೆಯಲ್ಲೇ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೋದಿ ಗುಣಗಾನ:

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ‘ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಕ್ಷಣಗಳನ್ನು ವೀಕ್ಷಿಸುವುದು ತುಂಬಾ ವಿಶೇಷವಾಗಿತ್ತು. ಈ ಗೌರವವು ನಮ್ಮ ರಾಷ್ಟ್ರದ ಪ್ರಗತಿಗೆ ಅವರ ನಿರಂತರ ಕೊಡುಗೆಗಳ ಮನ್ನಣೆಯಾಗಿದೆ. ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆ ಮತ್ತು ಆಧುನಿಕ ಭಾರತವನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರವು ನಮ್ಮ ಇತಿಹಾಸದಲ್ಲಿ ಅಳಿಸಲಾಗದ ಗುರುತು ಹಾಕಿದೆ. ಕಳೆದ ಹಲವು ದಶಕಗಳಲ್ಲಿ ಅವರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹರ್ಷಿಸಿದ್ದಾರೆ.

ಅಡ್ವಾಣಿ ಕೊಡುಗೆಗೆ ರಾಷ್ಟ್ರಪತಿ ಪ್ರಶಂಸೆ:ರಾಷ್ಟ್ರಪತಿ ಭವನ ಈ ಬಗ್ಗೆ ಟ್ವೀಟ್ ಮಾಡಿ, ‘ಭಾರತೀಯ ರಾಜಕೀಯದ ‘ದೊರೆ’ ​​ಅಡ್ವಾಣಿ ಅವರು 7 ದಶಕಗಳಿಂದ ಅಚಲವಾದ ಸಮರ್ಪಣೆ ಮತ್ತು ವಿಭಿನ್ನತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಸಂಸದರಾಗಿ, ಅವರು ಸಂವಾದಕ್ಕೆ ಒತ್ತು ನೀಡಿದ್ದು ಸಂಸದೀಯ ಸಂಪ್ರದಾಯಗಳನ್ನು ಎತ್ತಿ ಹಿಡಿದಿದ್ದರು ಎಂದರು. 

ಗೃಹ ಮಂತ್ರಿಯಾಗಿರಲಿ ಅಥವಾ ಉಪಪ್ರಧಾನಿಯಾಗಿರಲಿ, ಅಡ್ವಾಣಿ ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದರು. ಪಕ್ಷಾತೀತವಾಗಿ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದರು’ ಎಂದು ಹೇಳಿದೆ.‘ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಅವರ ಸುದೀರ್ಘ ಮತ್ತು ದಣಿವರಿಯದ ಹೋರಾಟವು 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ನಿರ್ಮಾಣದಲ್ಲಿ ಕೊನೆಗೊಂಡಿತು’ ಎಂದು ಅದು ಶ್ಲಾಘಿಸಿದೆ.‘ಸ್ವಾತಂತ್ರ್ಯಾನಂತರದ ಬೆರಳೆಣಿಕೆಯಷ್ಟು ರಾಜಕೀಯ ನಾಯಕರಲ್ಲಿ ಅಡ್ವಾಣಿ ಅವರು ರಾಷ್ಟ್ರೀಯ ಅಜೆಂಡಾವನ್ನು ಮರುರೂಪಿಸುವಲ್ಲಿ ಮತ್ತು ಅದನ್ನು ಅಭಿವೃದ್ಧಿಯ ಪಥದಲ್ಲಿ ಇರಿಸುವಲ್ಲಿ ಯಶಸ್ವಿಯಾದರು’ ಎಂದೂ ಭವನ ಪ್ರಶಂಸಿಸಿದೆ.