ಟೆಕಿಗೆ ₹2.41 ಲಕ್ಷ ಟೋಪಿ; ಆರಂಭದಲ್ಲಿ ಅಲ್ಪ ಪ್ರಮಾಣದ ಲಾಭ ತೋರಿಸಿ ಬಳಿಕ ಮೋಸ

| Published : May 10 2024, 01:36 AM IST / Updated: May 10 2024, 04:50 AM IST

ಟೆಕಿಗೆ ₹2.41 ಲಕ್ಷ ಟೋಪಿ; ಆರಂಭದಲ್ಲಿ ಅಲ್ಪ ಪ್ರಮಾಣದ ಲಾಭ ತೋರಿಸಿ ಬಳಿಕ ಮೋಸ
Share this Article
  • FB
  • TW
  • Linkdin
  • Email

ಸಾರಾಂಶ

ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್‌ ನೀಡಿ ಅಧಿಕ ಲಾಭದ ಆಸೆ ತೋರಿಸಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರಿಗೆ ₹2.41 ಲಕ್ಷ ವಂಚಿಸಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು : ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್‌ ನೀಡಿ ಅಧಿಕ ಲಾಭದ ಆಸೆ ತೋರಿಸಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರಿಗೆ ₹2.41 ಲಕ್ಷ ವಂಚಿಸಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೊಸರೋಡ್‌ ನಾಗನಾಥಪುರ ನಿವಾಸಿ ಶ್ರೀಧರಸ್ವಾಮಿ (29) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೂರುದಾರ ಶ್ರೀಧರಸ್ವಾಮಿಗೆ ಮೇ 3ರಂದು ಅಪರಿಚಿತ ನಂಬರ್‌ನಿಂದ ವಾಟ್ಸಾಪ್‌ಗೆ ಲಿಂಕ್‌ವೊಂದು ಬಂದಿದೆ. ಬಳಿಕ ಆ ಲಿಂಕ್‌ ತೆರೆದು ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಐಡಿ ಮೂಲಕ ಟಾಸ್ಕ್‌ ನೀಡಿದ್ದಾರೆ. ಶ್ರೀಧರಾಸ್ವಾಮಿ ಆ ಟಾಸ್ಕ್‌ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸ್ವಲ್ಪ ಲಾಭ ಬಂದಿದೆ. ನಂತರ ಹೆಚ್ಚಿನ ಲಾಭದ ಆಸೆಗೆ ತಮ್ಮ ಬ್ಯಾಂಕ್‌ ಖಾತೆಯಿಂದ ಅಪರಿಚಿತ ವ್ಯಕ್ತಿ ಕಳುಹಿಸಿದ್ದ ಲಿಂಕ್‌ನಲ್ಲಿನ ಬ್ಯಾಂಕ್‌ ಖಾತೆಗೆ ₹2.41 ಲಕ್ಷ ವರ್ಗಾಯಿಸಿದ್ದಾರೆ.

ಆದರೆ, ಯಾವುದೇ ಲಾಭವೂ ಬಂದಿಲ್ಲ. ಅಪರಿಚಿತ ವ್ಯಕ್ತಿಗೆ ಕರೆ ಮಾಡಿದರೆ, ಕರೆ ಸ್ವೀಕರಿಸಿಲ್ಲ. ಬಳಿಕ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಲಿಸಿಕೊಂಡು ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.